ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ
Share
ವೈಯಕ್ತಿಕ ಪ್ರತಿಭೆಯೂ, ಪ್ರಸಂಗದ ಚೌಕಟ್ಟೂ

ಲೇಖಕರು :
ಕೆ.ವಿ. ತಿರುಮಲೇಶ್
ಶುಕ್ರವಾರ, ಒಕ್ಟೋಬರ್ 18 , 2013

ತಾಳಮದ್ದಲೆಯೂ ಸೇರಿದಂತೆ ಹಲವು ಜಾನಪದ ಪ್ರಕಾರಗಳು ಆಧುನಿಕ ಕಾಲಘಟ್ಟದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ ಎಂಬ ವಿಚಾರಗಳು ಮತ್ತೆ ಮತ್ತೆ ಕೇಳಿಬರುತ್ತಿವೆ. ಧಾರ್ಮಿಕ ಕೇಂದ್ರಗಳಲ್ಲಿ ಮತ್ತು ಆಚರಣೆಗಳ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದು ಕಲಾಪ್ರಕಾರಗಳಲ್ಲಿ ಕೆಲವು ಆಧುನಿಕತೆಗೆ ಪಕ್ಕಾಗಿ ತನ್ನ ಆಂತರಿಕ ಸ್ವರೂಪದಲ್ಲಿಯೇ ಬದಲಾವಣೆ ಮಾಡಿಕೊಂಡರೆ ಇನ್ನೂ ಕೆಲವು ಮೂಲ ಸ್ವರೂಪದಲ್ಲಿಯೇ ಉಳಿದವು. ನಾಟಕ ಪ್ರಕಾರ ಆಧುನಿಕತೆಯನ್ನು ಜೀರ್ಣಿಸಿಕೊಂಡ ಕಾರಣಕ್ಕೆ ಈ ಹೊತ್ತು ತನ್ನ ಅಸ್ತಿತ್ವವನ್ನು ಉಳಿಸಿಕೊಂಡದ್ದಷ್ಟೇ ಅಲ್ಲ ಬಹು ವ್ಯಾಪಕವಾಗಿ ಬೆಳೆದಿದೆ. ತಾಳಮದ್ದಲೆಯನ್ನು ಕೇಂದ್ರವಾಗಿರಿಸಿಕೊಂಡಂತೆ ನಿಮ್ಮ ಅನಿಸಿಕೆಗಳನ್ನು ಬರೆದು ಕಳಿಸಲು ಕೋರಿದೆ.

ತಾಳಮದ್ದಲೆ ಯಕ್ಷಗಾನ ಬಯಲಾಟದ ಇನ್ನೊಂದು ರೂಪ: ವೇಷಭೂಷಣ, ಆಂಗಿಕಗಳಿಲ್ಲದೆ, ಕೇವಲ ಅರ್ಥಧಾರಿಗಳು ಒಂದೆಡೆ ಸೇರಿ ಕುಳಿತುಕೊಂಡು ಕೇವಲ ಸಂಭಾಷಣೆ (ಅರ್ಥಗಾರಿಕೆ) ಮೂಲಕ ನಡೆಸಿಕೊಡುವ ಕಾರ್ಯಕ್ರಮ. ಹಿನ್ನೆಲೆ ವಾದ್ಯಗಳು ಯಕ್ಷಗಾನದಲ್ಲಿರುವಂತೆಯೇ ಜಾಗಟೆ (ತಾಳ), ಚೆಂಡೆ ಮದ್ದಳೆಗಳಿಗೆ ಸೀಮಿತ. ಭಾಗವತರು ಇರುತ್ತಾರೆ, ಇರಲೇಬೇಕು--ಅವರೇ ಸಾಂಕೇತಿಕವಾಗಿ ಸಭಾಕೇಂದ್ರ. ಯಕ್ಷಗಾನ ಬಯಲಾಟಗಳು ನಡೆಯಲಾರದ ಮಳೆಗಾಲದ ಕಾರ್ಯಕ್ರಮವಾಗಿ ತಾಳಮದ್ದಲೆ ಹುಟ್ಟಿಬಂತೆಂದು ತೋರುತ್ತದೆ; ಮತ್ತು ವೇಷಭೂಷಣ ತೊಟ್ಟು ರಂಗದಲ್ಲಿ ನಟಿಸಲಾರದ, ಅಥವ ಅದಕ್ಕೆ ಅನುಕೂಲತೆಯಿರದ ಹವ್ಯಾಸಿ ಕಲಾವಿದರಿಗೆ ಇದೊಂದು ಅವಕಾಶವನ್ನೂ ಒದಗಿಸಿಕೊಡುವುದರಿಂದ ತೃಣಮೂಲ ಮಟ್ಟದಲ್ಲಿ ಇದು ಬೆಳೆಯುವದಕ್ಕೆ ಕಾರಣವಾಯಿತು ಎನಿಸುತ್ತದೆ. ತಾಳಮದ್ದಲೆಯಲ್ಲಿ ಸುಪ್ರಸಿದ್ಧ ಯಕ್ಷಗಾನ ಪಾತ್ರಧಾರಿಗಳೂ ಹವ್ಯಾಸಿಗಳ ಜತೆ ಭಾಗವಹಿಸುವುದಿದೆ. ಇಲ್ಲಿ ಪ್ರಸಂಗದ ಹಾಡುಗಳಿಗೆ ಅರ್ಥ ಹೇಳುವುದೇ ನಿರೂಪಣಾವಿಧಾನ. ಎಂದರೆ, ಯಕ್ಷಗಾನ ಬಯಲಾಟದಿಂದ ರಂಗಸ್ಥಳ, ವೇಷಭೂಷಣ, ಆಂಗಿಕ, ಕುಣಿತಗಳನ್ನು ತೆಗೆದುಹಾಕಿದರೆ ಅದೇ ತಾಳಮದ್ದಲೆ ಎನ್ನಬಹುದು. ತಾಳಮದ್ದಳೆಯಲ್ಲಿ ಅರ್ಥಧಾರಿಗಳು ಕುಳಿತುಕೊಂಡೇ ಅರ್ಥ ಹೇಳುತ್ತಾರೆ. ಕಾರ್ಯಕ್ರಮವು ಕಳೆಗಟ್ಟುವುದು ಭಾಗವತರ ಹಾಡು, ಚಂಡೆ ಮದ್ದಳೆ ಹಿಮ್ಮೇಳ ಮತ್ತು ಮುಖ್ಯವಾಗಿ ಅರ್ಥಧಾರಿಗಳ ಮಾತಿನ ಸೊಗಿಸಿನಿಂದ.

ಮಾತಿನ ಸೊಗಸು ಎಂದರೇನು? ಎದುರಾಳಿಯ ಮಾತಿಗೆ ಸಂದರ್ಭಾನುಸಾರ ತಕ್ಕ ವಸ್ತುವಿವರ ಮತ್ತು ಶೈಲಿಯ ವೈಖರಿಯಿಂದ ಪ್ರತಿಕ್ರಿಯಿಸುವುದು. ಇಲ್ಲಿ ಪಾತ್ರಧಾರಿಯ ವಿದ್ವತ್ತು-ಅವನಿಗೆ ಕತೆ, ಉಪಕತೆಗಳು, ನಾಣ್ಣುಡಿಗಳು, ಶಾಸ್ತ್ರಗಳು ಎಷ್ಟರ ಮಟ್ಟಿಗೆ ಗೊತ್ತಿರುತ್ತವೆ ಎನ್ನುವುದು--ಮುಖ್ಯವಾಗುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ, ಅರ್ಥಧಾರಿಗಳು ಪ್ರತ್ಯುತ್ಪನ್ನಮತಿಗಳಾಗಿರಬೇಕು. ಎಂದರೆ ಅವರಿಗೆ ಎದುರಾಳಿಗೆ ಥಟ್ಟನೆ ಉತ್ತರಿಸುವ ಚಾತುರ್ಯ ಬೇಕು. ಕತೆ, ಉಪಕತೆಗಳು, ಗಾದೆಗಳು, ಸಮಾನಾರ್ಥಪದಗಳು ಗೊತ್ತಿರಬೇಕು. ತ್ರಿಕರಣಗಳೆಂದರೆ ಯಾವುವು, ನವರಸಗಳು ಯಾವುವು, ಅಷ್ಟದಿಕ್ಪಾಲಕರು ಯಾರು ಯಾರು, ಯಾವ ಪೌರಾಣಿಕ ಪಾತ್ರ ಇನ್ನು ಯಾವ ಪಾತ್ರದ ಜತೆ ಸಂಬಂಧ ಹೊಂದಿದೆ, ಯಾವ ಯುಗದಲ್ಲಿ ಏನಾಯಿತು, ಒಂದೊಂದು ದೈವದ ಹಿನ್ನೆಲೆಯೇನು, ಯಾವ ಪಾತ್ರಕ್ಕೆ ಯಾವ ಶಕ್ತಿ ಮತ್ತು ಸ್ವಭಾವಗಳಿವೆ ಎಂದು ಮುಂತಾದ ಅರಿವು ಅಗತ್ಯ.

ಹಾಗೂ ಈ ಅರ್ಥಧಾರಿಗಳ ಮಾತುಗಳು ಸ್ವಾರಸ್ಯಕರವಾಗಿರಬೇಕು. ಆಯಾ ಪಾತ್ರದ ಗುಣಕ್ಕೆ ಅನುಗುಣವಾಗಿಯೂ ಇರಬೇಕು. ಎದುರಾಳಿಯ ಮಾತಿನ ಹೊಡೆತಕ್ಕೆ ಎದೆಗುಂದದೆ ತನ್ನತನವನ್ನು ಕಾಪಾಡಿಕೊಳ್ಳುವ ವ್ಯಕ್ತಿತ್ವವೂ ಅಗತ್ಯ.

ಹೀಗೆ ತಾಳಮದ್ದಳೆ ಪಾತ್ರಧಾರಿಗಳಿಂದ (ಅರ್ಥಧಾರಿಗಳಿಂದ) ಒಂದು ವಿಶಿಷ್ಟ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಅಪೇಕ್ಷಿಸುತ್ತದೆ. ಇದೇ ಮಾತು ಇಂಥ ಕಾರ್ಯಕ್ರಮಗಳನ್ನು ನೋಡಿ ಆನಂದಿಸುವ ಪ್ರೇಕ್ಷಕ ವರ್ಗಕ್ಕೂ ಅನ್ವಯವಾಗುತ್ತದೆ.

ತಾಳಮದ್ದಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ನಮ್ಮ ಮುಂದಿರುವ ಆಯ್ಕೆ ಮತ್ತು ದಾರಿಗಳಾವುವು?

ಯಕ್ಷಗಾನ ಬಯಲಾಟದಂತೆಯೇ ತಾಳಮದ್ದಲೆಯೂ ಕೆಳಮೌಲ್ಯದ ಒಂದು ಮನೋರಂಜನೆ ಎಂಬ ಧಾರಣೆ ಕೆಲವರಲ್ಲಿದೆ. ಯಕ್ಷಗಾನ ಬಯಲಾಟವಾದರೆ ಇಂದು ಸ್ವಲ್ಪ ಮಟ್ಟಿಗೆ ಉನ್ನತೀಕರಣಗೊಂಡಿದೆ ಎನ್ನಬಹುದು. ಆದರೆ ತಾಳಮದ್ದಲೆ ಇನ್ನೂ ಮೊದಲಿನ ಸ್ಥಿತಿಯಲ್ಲೇ ಇದೆ. ತಾಳಮದ್ದಲೆಯ ಗೌರವವನ್ನು ಮನ್ನಿಸುವುದು ಅಗತ್ಯ. ಇಂದು ಯಾವುದೇ ಕಲಾಪ್ರಕಾರಕ್ಕೆ ಅಕಡೆಮಿಕ್ ಮನ್ನಣೆ ದೊರೆತರೇನೇ ಅದು ಗೌರವಕ್ಕೆ ಒಳಗಾಗುತ್ತದೆ. ಆದ್ದರಿಂದ ಶಾಲೆ ಕಾಲೇಜುಗಳಲ್ಲಿ ತಾಳಮದ್ದಲೆಗೆ ಪ್ರವೇಶ ದೊರಕಬೇಕಾಗಿದೆ. ಉದಾಹರಣೆಗೆ, ಶಾಲೆ ಕಾಲೇಜುಗಳಲ್ಲಿ ತಾಳಮದ್ದಲೆ ಕಾರ್ಯಕ್ರಮಗಳನ್ನು ಆಯೋಜಿಸಬಹುದು--ನುರಿತ ಕಲಾವಿದರಿಂದ, ಅಥವಾ ವಿದ್ಯಾರ್ಥಿಗಳಿಂದ ಅಥವಾ ಇವೆರಡೂ ಪಂಗಡಗಳ ಸಂಯೋಗದಿಂದ.

ಇಂಥ ಕಾರ್ಯಕ್ರಮಗಳು ಕೇವಲ ಗ್ರಾಮಾಂತರ ಪ್ರದೇಶಗಳಿಗಷ್ಟೇ ಸೀಮಿತವಾಗಿರಬಾರದು; ನಗರ ಕೇಂದ್ರಗಳಲ್ಲೂ ಅವು ನಡೆಯಬೇಕು--ಉದಾಹರಣೆಗೆ, ಸಾಹಿತ್ಯ ಪರಿಷತ್ತಿನಲ್ಲಿ, ಯುನಿವರ್ಸಿಟಿಗಳಲ್ಲಿ, ಪುಸ್ತಕ ಬಿಡುಗಡೆಯೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ.

ಇಂದು ಯಕ್ಷಗಾನ ತರಬೇತಿ ಕೇಂದ್ರಗಳಿವೆ; ಇವೇ ಕೇಂದ್ರಗಳಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ--ಉದಾಹರಣೆಗೆ, ವಿದ್ಯಾರ್ಥಿಗಳ ಬೇಸಿಗೆ ಶಿಬಿರವಾಗಿ--ಯುವ ಜನತೆಗೆ ತಾಳಮದ್ದಲೆ ಕಲಿಸಿಕೊಡುವ ಏರ್ಪಾಡುಗಳನ್ನು ನಿಯೋಜಿಸಿದರೆ ಚೆನ್ನಾಗಿರುತ್ತದೆ.

ಹಿಂದೆ ಬಯಲಾಟಗಳು ಕೇವಲ ಪುರುಷರಿಗಷ್ಟೇ ಸೀಮಿತವಾಗಿದ್ದುವು; ಅದರಲ್ಲೂ ಉಚ್ಚ ವರ್ಗದ ಪುರುಷರಿಗೆ. ಈಗ ಈ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ: ಕೆಳವರ್ಗದ ಜನರೂ, ಹವ್ಯಾಸಿ ತಂಡಗಳಾಗಿ ಸ್ತ್ರೀಯರೂ ಬಯಲಾಟದಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಸುಧಾರಣೆ ತಾಳಮದ್ದಲೆಯಲ್ಲೂ ಬರಬೇಕಾಗಿದೆ. ವರ್ಗರಹಿತ ಸಮಾಜದಿಂದಷ್ಟೇ ಇದು ಸಾಧ್ಯ. ಹಾಗೂ ಇಂಥ ವರ್ಗರಹಿತ ಸಮಾಜಕ್ಕೆ ಬಹುಶಃ ತಾಳಮದ್ದಲೆ ತನ್ನ ಕೊಡುಗೆಯನ್ನು ನೀಡಲೂ ಬಹುದು.

ಯಕ್ಷಗಾನ ತಾಳಮದ್ದಲೆಗಳು ಪಾರಂಪರಿಕ ಪ್ರಸಂಗಗಳನ್ನು ಎತ್ತಿಕೊಂಡು ಅವುಗಳಲ್ಲಿ ಕಂಡುಬರುವ--ಹಾಗೂ ಇಂದಿನ ಸಮಾಜಕ್ಕೆ ವಿರುದ್ಧವಾದ--ಕೆಲವು ಆಚರಣೆಗಳನ್ನೂ ಮೌಲ್ಯಗಳನ್ನೂ ಮತ್ತೆ ಮತ್ತೆ ಚಲಾಯಿಸುವಂತೆ ತೋರುವುದಿಲ್ಲವೇ? ಆದ್ದರಿಂದ ಇಂದಿನ ಮತ್ತು ಮುಂದಿನ ಸಮಾಜಕ್ಕೆ ಇಂಥ ಕಲೆಗಳ ಅಗತ್ಯವೇನು?

ಈ ಮಾತು ಎಲ್ಲಾ ಪುರಾತನ ಕಲೆಗಳ ಕುರಿತೂ ಹೇಳಬಹುದು--ಕ್ಲಾಸಿಕಲ್ ಸಂಗೀತ, ಭರತನಾಟ್ಯ ಇತ್ಯಾದಿ. ಪುರಾತನ ಕಲೆಗಳನ್ನು ಇಡಿಯಾಗಿ ಬಿಟ್ಟುಬಿಡುವುದಕ್ಕಿಂತ ಅವುಗಳನ್ನು ನಮ್ಮ ಇತಿಹಾಸವಾಗಿ ಇರಿಸಿಕೊಳ್ಳುವುದೇ ಒಳ್ಳೆಯದು. ತಾಳಮದ್ದಲೆಯ ಕುರಿತು ಹೇಳುವುದಾದರೆ, ಪ್ರಸಂಗ ಏನೇ ಇರಲಿ, ಅದರಲ್ಲಿ ಪ್ರತಿ ಪಾತ್ರಧಾರಿಗೂ ಮಾತಿನ ಅವಕಾಶವಿದೆ. ಪ್ರಸಂಗ ಸಾಗುವ ರೀತಿ ಪೂರ್ವನಿರ್ಧರಿತವೆನ್ನುವುದು ನಿಜವಾದರೂ, ಆಯಾ ಪಾತ್ರಧಾರಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿ ಕೊಡುವುದು ಸಾಧ್ಯ. ಪಂಪ ರನ್ನರಂಥ ಕವಿಗಳೂ ತಮ್ಮ ಧುರ್ಯೋಧನ, ಕರ್ಣ ಮುಂತಾದ ಪಾತ್ರಗಳಿಗೆ ಆಯಾ ಪಾತ್ರಗಳ ದೃಷ್ಟಿಕೋನಗಳನ್ನು ನೀಡಿದರೆನ್ನುವುದನ್ನು ಮರೆಯಲಾಗದು. ಆದ ಕಾರಣವೇ ಅವರ ಕಾವ್ಯಗಳೂ ಹಲವು ಆಯಾಮಗಳನ್ನು ಒಳಗೊಂಡಂತೆ ಅನಿಸುವುದು. ಇದೇ ಮಾತು ತಾಳಮದ್ದಲೆಗೆ ಸಂಬಂಧಿಸಿಯೂ ನಿಜ. ಇತಿಹಾಸ ಪುರಾಣಗಳನ್ನು ಮರೆಯದೆ ಇರುವುದಕ್ಕಾದರೂ (ಪುರಾಣಗಳೂ ನಮ್ಮ ಇತಿಹಾಸದ ಭಾಗವೇ ಆಗಿರುವುದರಿಂದ) ನಮಗೆ ಇಂಥ ಕಲೆಗಳ ಪ್ರಯೋಗಗಳು ಬೇಕಾಗಿವೆ.

ಇನ್ನು ಕನ್ನಡ ಭಾಷೆಯ ದೃಷ್ಟಿಯಿಂದಲೂ ತಾಳಮದ್ದಲೆಗೆ ಮಹತ್ವವಿದೆ: ಮೂಲತಃ ಮೌಖಿಕ ಪರಂಪರೆಗೆ ಸೇರಿದ ಈ ಕಲೆ ಕನ್ನಡದ ಹಿತರಕ್ಷಣೆಗೆ ಸಹಾಯಕವಾಗುವಂಥದು. ತಾಳಮದ್ದಲೆಯ ಅರ್ಥಗಾರಿಕೆ ಬಾಯಿಮಾತಿನ ಮೂಲಕ ನಡೆಯುವಂಥದು; ಆದರೂ ಇದು ಬೀದಿ ಮಾತೂ ಅಲ್ಲ: ಒಂದು ಹದ ಮಟ್ಟದ ವಿದ್ಯಾವಂತ ಕನ್ನಡ. ಇಡೀ ಕನ್ನಡ ಗ್ರಾಮಾಂತರದ ಭಾಷಾಪ್ರೌಢಿಮೆಯನ್ನು ಇದು ಒಳಗೊಂಡಿದೆ. ಈ ಕನ್ನಡ ತಲೆಮಾರಿನಿಂದ ತಲೆಮಾರಿಗೆ ಹರಿದು ಬರುವುದಕ್ಕೆ ತಾಳಮದ್ದಲೆ ಒಂದು ವಿಧಾನ.

ತಾಳಮದ್ದಳೆಯ ದಿಗ್ಗಜ ಶೇಣಿ ಗೋಪಾಲಕೃಷ್ಣ ಭಟ್ ಹಾಗೂ ಮಲ್ಪೆ ರಾಮದಾಸ ಸಾಮಗ
ನಿಜ, ತಾಳಮದ್ದಲೆಯ ಅರ್ಥಗಾರಿಕೆ ಸಾಮಾನ್ಯವಾಗಿ ಯಾರೂ ಆಡು ಮಾತಿನಲ್ಲಿ ಬಳಸುವಂಥದಲ್ಲ. ಅದೊಂದು ಶೈಲೀಕೃತ, ಸ್ವಲ್ಪ ಕೃತಕವಾಗಿಯೇ ಕಾಣಿಸುವಂಥ ಕನ್ನಡ. ಅದಕ್ಕೊಂದು ಆರ್ಕೇಯ್ಕ್ ಗುಣವಿದೆ, ಸ್ವಲ್ಪ ಅಬ್ಬರವೂ ಇದೆ. ಆದರೂ ಅದರಲ್ಲಿ ಅಡಗಿರುವ ಶಬ್ದಭಂಡಾರ ಅಗಾಧವಾದುದು. ಅಲ್ಲದೆ ಅರ್ಥಗಾರಿಕೆಯ ತಾರ್ಕಿಕ ವಿಧಾನದಿಂದ ನಾವು ಕಲಿತುಕೊಳ್ಳುವುದಕ್ಕೆ ಬಹಳಷ್ಟಿದೆ. ಪ್ರತಿಯೊಂದು ಪಾತ್ರವೂ ತನ್ನನ್ನು ತಾನು ಸಮರ್ಥಿಸಿಕೊಳ್ಳುವುದರಲ್ಲಿ ಪ್ರಜಾಪ್ರಭುತ್ವದ ಮೂಲ ಪ್ರವೃತ್ತಿ ಇದೆಯೆನಿಸುತ್ತದೆ. ಹೀಗೆ ಸಮರ್ಥಿಸಿಕೊಂಡರೂ ಎಲ್ಲಾ ಪಾತ್ರಗಳೂ ಪ್ರಸಂಗ ಎತ್ತಿಹಿಡಿಯುವ ಮೌಲ್ಯಗಳಿಗೆ ತಲೆಬಾಗಲೇ ಬೇಕಾಗುತ್ತದೆ ಎನ್ನುವುದು ಕೂಡ ಅರ್ಥಪೂರ್ಣವಾದ ಸಂಗತಿಯೇ.

ಅರ್ಥಗಾರಿಕೆಯ ಶೈಲಿ ಮಾತಿಗೆ ಭೂತಗನ್ನಡಿ ಹಿಡಿದ ಹಾಗೆ: ಎಲ್ಲವನ್ನೂ ಅದು ಹಿಗ್ಗಿಸಿ, ಕೇಂದ್ರೀಕರಿಸಿ ತೋರಿಸುತ್ತದೆ. ಆದ್ದರಿಂದಲೇ ಒಬ್ಬ ಪಾತ್ರಧಾರಿ ಅತಳ, ವಿತಳ, ಪಾತಾಳದಂಥ ಪಟ್ಟಿಗಳನ್ನು ಪದೇ ಪದೇ ತಂದರೆ ಅದು ಆಭಾಸವೆನಿಸುತ್ತದೆ; ಔಚಿತ್ಯವಿಲ್ಲದ ಗ್ರಾಮ್ಯವನ್ನೋ, ಪಾತ್ರಕ್ಕೆ ಒಗ್ಗದ ಹಾಸ್ಯವನ್ನೋ, ಲೈಂಗಿಕತೆಯನ್ನೋ, ಲೈಂಗಿಕ ಅರ್ಥ ಬರುವಂಥ ಶ್ಲೇಷೆ ಅಥವಾ ದ್ವಂದ್ವಾರ್ಥಗಳನ್ನು ತಂದರೆ ಅದೂ ಕೇಳುಗರಿಗೆ ಹಿಡಿಸುವುದಿಲ್ಲ. ಅರ್ಥಗಾರಿಕೆಗೆ ಔಚಿತ್ಯ ಬಹಳ ಮುಖ್ಯ ಸಂಗತಿಯಾಗುತ್ತದೆ. ‘ಪದನರಿತು ನುಡಿಯಲುಂ, ನುಡಿದುದನರಿಯಲುಂ’ ಎಂಬ ಕವಿ ವಾಣಿ ಇಲ್ಲಿ ಪ್ರಸ್ತುತವಾದುದು. ಹಾಗೆಂದು ಇದು ನಾಟಕದಲ್ಲಿರುವಂತೆ, ಯಾರೋ ಬರೆದ ಮಾತಿಗೆ ಗಿಳಿಪಾಠ ಒಪ್ಪಿಸುವುದೂ ಅಲ್ಲ; ಸ್ವಯಂ ಪ್ರತಿಭೆಗೆ ಬೇಕಷ್ಟು ಅವಕಾಶವಿದೆ. ಹಾಗೆಂದು ಮಾತಿನಲ್ಲೂ ಸಂದರ್ಭದ ಲಕ್ಷ್ಯವಿಲ್ಲದೆ ಮಿತಿಯಿಲ್ಲದಷ್ಟು ಅಲಂಕಾರಗಳನ್ನು ತುರುಕಿಸಿದರೆ ಅದೂ ಜನಕ್ಕೆ ಹಿಡಿಸುವುದಿಲ್ಲ. ಉದಾಹರಣೆಗೆ, ಕೆಲವು ಅರ್ಥಧಾರಿಗಳು ಅತಿಯಾದ ಅಂತ್ಯ ಪ್ರಾಸಗಳನ್ನೋ ಒಳ ಪ್ರಾಸಗಳನ್ನೋ ತಂದು ಕೇಳುಗರಿಗೆ ಬೇಸರ ಮೂಡಿಸುವುದಿದೆ. ಅರ್ಥ ಹೇಳುವುದರಲ್ಲಿ ಸ್ವಯಂ ಪ್ರತಿಭೆಗೆ ಅವಕಾಶವಿದೆ, ಆದರೆ ಯಾವುದೂ ಒಂದು ಚಟವಾದರೆ ಅದು ಚಟದ ಮಟ್ಟದಲ್ಲೇ ಉಳಿದು ಬಿಡುತ್ತದೆ. ಅರ್ಥ ಹೇಳುವುದರ ಉದ್ದೇಶ ಅದಲ್ಲ; ಅರ್ಥ ಜನರನ್ನು ಔನ್ನತ್ಯದತ್ತ ಒಯ್ಯಬೇಕು. ಆದ್ದರಿಂದ ವಿದ್ವತ್ತಿನಷ್ಟೇ ಔಚಿತ್ಯಪ್ರಜ್ಞೆಯೂ ಮುಖ್ಯವಾಗುತ್ತದೆ.

ಕೆಲವು ಅರ್ಥಧಾರಿಗಳು ಮಾತಿನ ನಡುವೆ ಸಮಕಾಲೀನ ವಿಷಯಗಳನ್ನು ಧ್ವನಿಸಬಹುದು: ಉದಾಹರಣೆಗೆ, ಭ್ರಷ್ಟಾಚಾರ! ಕೌರವನ ರಾಜ್ಯದಲ್ಲಿ ಅಥವಾ ವಿರಾಟರಾಯನ ಅರಮನೆಯಲ್ಲಿ. ಇಂಥ ಉಲ್ಲೇಖಗಳು ಮಿತವಾಗಿದ್ದರೆ ಕೇಳುಗರಿಗೆ ಇಷ್ಟವಾಗುವ ಸಂಗತಿ. ಆದರೆ ಇಂಥವನ್ನು ಸಮಕಾಲೀನ ರಾಜಕೀಯ ಸಂದರ್ಭಕ್ಕೆ ಸಮಾನಾಂತರವಾಗಿ ವಿಸ್ತರಿಸುತ್ತ ಹೋದರೆ ಅದೂ ಬೇಸರ ತರಿಸಬಹುದು.

ಇನ್ನು ಕೆಲವು ಅರ್ಥಧಾರಿಗಳು ವೈಯಕ್ತಿಕತೆಯನ್ನು ಮೆರೆಯಲೆಂದು ಮೊಂಡುವಾದಗಳನ್ನು ಹೂಡುತ್ತ ಎದುರಾಳಿಗೆ ಮಾತನ್ನೇ ಬಿಟ್ಟುಕೊಡದೆ ಆಭಾಸಕ್ಕೆ ಎಡೆಮಾಡಿಕೊಡುತ್ತಾರೆ. ಉದಾಹರಣೆಗೆ, ಮರೆಯಲ್ಲಿ ನಿಂತು ತನಗೆ ಬಾಣಹೂಡಿದ ಶ್ರೀರಾಮನ ಕೃತ್ಯವನ್ನು ವಾಲಿ ಖಂಡಿಸುತ್ತಾನೆ. ಹೀಗೆ ಖಂಡಿಸುವುದು ಸರಿ. ಆದರೆ ಶ್ರೀರಾಮನು ಕ್ಷಮೆ ಕೇಳದೆ ತಾನು ಸಾಯಲಾರೆ ಎಂದು ವಾಲಿಯ ಪಾತ್ರಧಾರಿ ಹಟ ಹಿಡಿಯುವುದು ಆಭಾಸವಾದೀತು. ಆಗ ಭಾಗವತರು ಮುಂದಿನ ಪದ್ಯಕ್ಕೆ ಧಾವಿಸಬೇಕಾಗುತ್ತದೆ. ತಾಳಮದ್ದಳೆ, ಬಯಲಾಟದ ಹಾಗೆಯೇ, ಒಂದು ಮೇಳ ಕಲೆ. ಅದರಲ್ಲಿ ವೈಯಕ್ತಿಕ ಪ್ರತಿಭೆಗೆ ಸ್ಥಾನವಿದ್ದರೂ ಒಟ್ಟು ಪ್ರಸಂಗದ ಚೌಕಟ್ಟನ್ನು ಮೀರುವುದು ‘ಅಧಿಕ ಪ್ರಸಂಗ’ವಾಗುತ್ತದೆ!

ಹೀಗೆ ಈ ಕಲೆಯಿಂದ ನಾವು ಕಲಿಯುವುದು ಬಹಳಷ್ಟಿದೆ.



ಕೃಪೆ : http://www.kendasampige.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ